ಬಾರ್ನ್, ಮ್ಯಾಕ್ಸ್
1882-1970. ಜರ್ಮನ್-ಬ್ರಿಟಿಷ್ ಸೈದ್ಧಾಂತಿಕ ಭೌತವಿಜ್ಞಾನಿ. ನೊಬೆಲ್ ಪ್ರಶಸ್ತಿ ವಿಜೇತ. ಮಹಾ ಮಾನವತಾವಾದಿ. ಈ ಶತಮಾನದ ಪ್ರತಿಭಾವಂತ ಭೌತವಿಜ್ಞಾನಿಗಳ ಪೈಕಿ ಒಬ್ಬ. ಅನೇಕ ಭೌತ ವಿಜ್ಞಾನಿಗಳಿಗೆ ಗುರುವೂ ಮಾರ್ಗದರ್ಶಕನೂ ಆಗಿದ್ದ ಈತ 1920-30ರಲ್ಲಿ ಗಟಿಂಗೆನ್ನಿನ ಜಾರ್ಜಿಯಾ ಆಗಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಅದು ಸೈದ್ಧಾಂತಿಕ ಭೌತ ವಿಜ್ಞಾನಿಗಳಿಗೆ ಪವಿತ್ರ ಯಾತ್ರಾಸ್ಥಳವಾಗಿತ್ತು. ಪರಮಾಣು ಯುಗದ ನೇತಾರುಗಳಾದ ಎನ್ರಿಕೊ ಫರ್ಮಿ, ರಾಬರ್ಟ್ ಓಪನ್ ಹೈಮರ್, ಎಡ್ವರ್ಡ್‍ಚೆಲ್ಲರ್, ವರ್ನರ್ ಹೈಸನ್ ಬರ್ಗ್ ಮೊದಲಾದವರು ಈತನಲ್ಲಿ ಕಲಿತುಸ್ಫೂರ್ತಿ ಪಡೆದವರು. ಮುಂದೆ ಇವರ ಪೈಕಿ ಅನೇಕರು ನೊಬೆಲ್ ಬಹುಮಾನ ಪಡೆದುದರಿಂದ ಗಟಿಂಗನ್ ವಿಶ್ವವಿದ್ಯಾಲಯಕ್ಕೆ ನೊಬೆಲ್‍ಪ್ರಶಸ್ತಿ ವಿಶ್ವವಿದ್ಯಾಲಯ ಎಂಬ ಹೆಸರು ಬಂದಿತ್ತು. ಇಲ್ಲಿಯ ವೈಜ್ಞಾನಿಕ ಚಟುವಟಿಕೆಗಳಿಗೆ ಕೇಂದ್ರ ಸ್ಥಾನದಲ್ಲಿದ್ದ ಮ್ಯಾಕ್ಸ್ ಬಾರ್ನ್‍ನನ್ನು ಭೌತವಿಜ್ಞಾನಿಗಳ ಭೌತವಿಜ್ಞಾನಿ ಎಂದು ಕರೆಯುತ್ತಿದ್ದರು.

ಪ್ರಷ್ಯದ ಬ್ರೆಸ್ಲಾ ಎಂಬಲ್ಲಿ ಮ್ಯಾಕ್ಸ್ ಬಾರ್ನ್ 1882 ಡಿಸೆಂಬರ್ 11 ರಂದು ಹುಟ್ಟಿದ. ಇವನ ತಂದೆ ಬ್ರೆಸ್ಲಾ ವಿಶ್ವವಿದ್ಯಾಲಯದಲ್ಲಿ ಅಂಗಛೇದನ ವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ಮಗ ಬಾರ್ನ್ ಇನ್ನೂ ಚಿಕ್ಕವನಿದ್ದಾಗ ತಾಯಿ ತೀರಿಕೊಂಡಿದ್ದಳು. ಶಾಲೆಯ ಕೊನೆಯ ವರ್ಷದಲ್ಲಿದ್ದಾಗ ತಂದೆಯೂ ಗತಿಸಿದ. ಬಾರ್ನ್ ವಿದ್ಯಾಭ್ಯಾಸ ಮಾಡಿದ್ದು ಬ್ರೆಸ್ಲಾ ಹೈಡಲ್‍ಬರ್ಗ್, ಜೂóರಿಕ್ ಮತ್ತು ಗಟಿಂಗನ್ ವಿಶ್ವವಿದ್ಯಾಲಯಗಳಲ್ಲಿ. ಡೀವಿಡ್ ಹಿಲ್‍ಬರ್ಟ್, ಹರ್ಮನ್ ಮಿಂಕಾವ್ಸ್ಕ್ಕೀ ಮತ್ತು ಫೆಲಿಕ್ಸ್ ಕ್ಲೈನ್‍ರಂಥ ಮಹಾನ್ ಗಣಿತವಿಜ್ಞಾನಿಗಳು ಇವನ ಅಧ್ಯಾಪಕರಾಗಿದ್ದರು. ಡಾಕ್ಟೊರೇಟ್ ಪದವಿ ಪಡೆದು ಕೇಂಬ್ರಿಜಿಗೆ ಹೋದ. 1908ರಲ್ಲಿ ಮಿಂಕಾವ್ಸ್ಕೀಯ ಸಹಾಯಕನಾಗಿ ಗಟಿಂಗನ್ನಿಗೆ ಬಂದವನು ಅಲ್ಲಿಯೇ ಉಪನ್ಯಾಸಕನಾದ. 1915ರಲ್ಲಿ ಇವನನ್ನು ಬರ್ಲಿನಿನಲ್ಲಿ ಪ್ರಾಧ್ಯಾಪಕನಾಗಿ ನೇಮಿಸಿದರೂ ಆ ವೇಳೆಗೆ ಯುದ್ಧ ಪ್ರಾರಂಭವಾದದ್ದರಿಂದ ಸೈನಿಕ ಸೇವೆ ಸೇರಬೇಕಾಯಿತು. ಆದರೂ ಇವನಿದ್ದ ವಿಭಾಗದಲ್ಲಿ ವಿರಾಮ ಸಿಗುತ್ತಿದ್ದುದರಿಂದ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಕೆಲಸ ಮುಂದುವರಿಸಿದ. ಇದೇ ಸುಮಾರಿಗೆ ಇವನಿಗೆ ಐನ್‍ಸ್ಟೈನನ ಸ್ನೇಹವಾಯಿತು. ಯುದ್ಧ ಮುಗಿದ ಬಳಿಕ ಫ್ರಾಂಕ್‍ಫರ್ಟಿಗೆ ಹೋದ. ಅಲ್ಲಿದ್ದ ಎರಡು ವರ್ಷಗಳಲ್ಲಿ ಕೆಲವು ಪ್ರಾಯೋಗಿಕ ಸಂಶೋಧನೆಗಳನ್ನೂ ನಡೆಸಿದ. ಗಟಿಂಗನ್ನಿನಲ್ಲಿ ಪ್ರಾಧ್ಯಾಪಕನಾಗಿ ಸೇರಿದ ಮೇಲೆ ಶಕಲಬಲವಿಜ್ಞಾನದಲ್ಲಿ ಸಂಶೋಧನೆ ಮಾಡಿದ. ಆ ವೇಳೆಗಾಗಲೇ ನೊಬೆಲ್ ಬಹುಮಾನ ಗಳಿಸಿ ಪ್ರಸಿದ್ಧನಾಗಿದ್ದ ಜೇಮ್ಸ್ ಫ್ರ್ಯಾಂಕ್ ಮತ್ತು ಬಾರ್ನ್‍ನಿಗೆ ಗುರುವಾಗಿದ್ದ ಹಿಲ್ಬರ್ಟ್ ಅಲ್ಲಿದ್ದ. ಆದರೆ ಹಿಟ್ಲರ್ ಅಧಿಕಾರಕ್ಕೆ ಬಂದಮೇಲೆ ಅನೇಕ ಯೆಹೂದಿ ನಿರಾಶ್ರಿತರೊಡನೆ ಬಾರ್ನ್ ಕೂಡ ಜರ್ಮನಿ ತೊರೆಯಬೇಕಾಯಿತು. ಕೇಂಬ್ರಿಜಿನ ಸ್ಟೋಕ್ಸ್ ಅಧ್ಯಾಪಕತ್ವ ಸ್ವೀಕರಿಸಿ ಅಲ್ಲಿ ಮೂರು ವರ್ಷ ಕಳೆದ. ಅದೇ ವೇಳೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಆಹ್ವಾನ ಮನ್ನಿಸಿ 1935 ಸೆಪ್ಟೆಂಬರಿನಿಂದ 1936 ಮಾರ್ಚ್ ತನಕ ಆ ಸಂಸ್ಥೆಯಲ್ಲಿ ಗಣಿತ ಭೌತವಿಜ್ಞಾನದ ರೀಡರ್ ಆಗಿ ಕೆಲಸಮಾಡಿದ. 1936ರಲ್ಲಿ ಎಡಿನ್‍ಬರೋ ವಿಶ್ವವಿದ್ಯಾಲಯದ ಟೈಟ್ ಪೀಠಕ್ಕೆ ಆಯ್ಕೆಯಾದ. 1939ರಲ್ಲಿ ಬ್ರಿಟಿಷ್ ಪೌರತ್ವ ಸ್ವೀಕರಿಸಿದ. ಮುಂದೆ 1953ರಲ್ಲಿ ನಿವೃತ್ತಿಹೊಂದುವ ತನಕ ಅಂದರೆ 17 ವರ್ಷಗಳ ಕಾಲ ಇಲ್ಲಿಯೇ ಇದ್ದ. ನಿವೃತ್ತಿ ಹೊಂದಿದ ತರುವಾಯ ಜರ್ಮನಿಗೆ ಮರಳಿ ಗಟಿಂಗನ್ನಿಗೆ ಹತ್ತಿರದ ಒಂದು ಸ್ಥಳದಲ್ಲಿ ನೆಲಸಿದ

ಆಧುನಿಕ ಪರಮಾಣು ಹಾಗೂ ನ್ಯೂಕ್ಲಿಯರ್ ಭೌತವಿಜ್ಞಾನಿಗಳಿಗೆ ಆಧಾರವಾಗಿರುವ ಶಕಲಬಲವಿಜ್ಞಾನದ ಅಭಿವರ್ಧನೆಯಲ್ಲಿ ಈತನ ಪಾತ್ರ ಮಹತ್ತ್ವಪೂರ್ಣವಾದದ್ದು.

ಬೋರ್ ಮತ್ತು ಸಾಮರ್‍ಫೆಲ್ಡರ ಪರಮಾಣು ಶಕಲ ಸಿದ್ಧಾಂತ ಆಧರಿಸಿ ಹೀಲಿಯಮ್ ಪರಮಾಣುವಿನ ರೇಖಾರೋಹಿತವನ್ನು (ಲೈನ್ ಸ್ಪೆಕ್ಟ್ರಮ್) ವಿವರಿಸಲು ಸಾಧ್ಯವಿಲ್ಲ ಎಂಬುದನ್ನು ಹೈಸನ್‍ಬರ್ಗ್ ಮತ್ತು ಬಾರ್ನ್ ತೋರಿಸಿಕೊಟ್ಟರು. ಇದಕ್ಕಾಗಿ ಹೈಸನ್‍ಬರ್ಗ್ ಒಂದು ಹೊಸ ವಿಧಾನವನ್ನೇ ಶೋಧಿಸಿದ. ಈ ವಿಧಾನ ಮಾತೃಕಾ ಕಲನವಿಜ್ಞಾನವಲ್ಲದೆ (ಮ್ಯಾಟ್ರಿಕ್ಸ್ ಕ್ಯಾಲ್ಕ್ಯುಲಸ್) ಬೇರೆ ಅಲ್ಲ ಎಂಬುದನ್ನು ಬಾರ್ನ್ ತೋರಿಸಿದ.

ಎರ್ವಿನ್ ಶ್ರೇಡಿಂಗರ್ ಪ್ರತಿಪಾದಿಸಿದ ಸಮೀಕರಣದಲ್ಲಿ ಬರುವ ಅಲೆ ಉತ್ಪನ್ನಕ್ಕೆ (ವೇವ್ ಫಂಕ್ಷನ್) ಭೌತವ್ಯಾಖ್ಯಾನ ಒದಿಗಿಸಿದ ಕೀರ್ತಿ ಬಾರ್ನ್‍ನಿಗೆ ಸಲ್ಲುತ್ತದೆ. ಯಾವುದೇ ಕಣ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇರಬಹುದಾದ ಸಂಭಾವ್ಯತೆಯನ್ನು ಈ ಅಲೆ ಉತ್ಪನ್ನ ನೀಡುವುದೆಂದೂ ಒಂದು ನಿರ್ದಿಷ್ಟ ಗಾತ್ರದಲ್ಲಿ ಒಂದು ಬಿಂದುವಿನ ಸುತ್ತ ಇರುವ ಸಂಭಾವ್ಯತೆಯನ್ನು ಇದರ ವರ್ಗ ಕೊಡುವುದೆಂದೂ ಪ್ರತಿಪಾದಿಸಿದ. ಇಂದಿಗೂ ಇದೇ ಶಕಲಬಲವಿಜ್ಞಾನದ ಅಡಿಗಲ್ಲಾಗಿ ನಿಂತಿದೆ. ಐನ್‍ಸ್ಟೈನ್, ಡಿ ಬ್ರಾಗ್ಲಿ, ಮ್ಯಾಕ್ಸ್ ಪ್ಲ್ಯಾಂಕ್, ಶ್ರೇಡಿಂಗರ್ ಮೊದಲಾದವರು ಇದಕ್ಕೆ ತೀವ್ರ ಆಕ್ಷೇಪಣೆ ಎತ್ತಿದರು. ಆದರೆ ಪ್ರಯೋಗಗಳು ಬಾರ್ನ್‍ನ ವ್ಯಾಖ್ಯಾನವನ್ನು ಸ್ಥಿರೀಕರಿಸಿದುವು.

ಬಾರ್ನ್‍ಸನ್ನಿಹಿತತೆ (ಬಾರ್ನ್ ಅಪ್ರಾಕ್ಸಿಮೇಶನ್) ಎಂದು ಕರೆಯಲಾಗುವ ಒಂದು ಹೊಸ ತಂತ್ರವನ್ನೇ ಬಾರ್ನ್ ಶೋಧಿಸಿದ. ಇದು ಪರಮಾಣುಕಣಗಳು ಚದರಿಹೋಗುವುದಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ. ಕ್ಷೋಭೆ ಸಿದ್ಧಾಂತವನ್ನು (ಪರ್ಟಬೇಷನ್ ತೀಯರಿ) ಅನ್ವಯಿಸಲು ನೆರವಾಯಿತು. ಅಂತರ ಪರಮಾಣು ಬಲಗಳಿಗೆ ಸಂಬಂಧಿಸಿದ ಅಣುಗಳ ಬಾರ್ನ್ ಓಪನ್‍ಹೈಮರ್ ಸಿದ್ಧಾಂತ ಪ್ರತಿಪಾದಿಸುವುದರಲ್ಲಿಯೂ ಬಾರ್ನ್‍ನ ಪಾತ್ರವಿದೆ. ಸ್ಫಟಿಕವಿಜ್ಞಾನ ಮತ್ತು ತರಲಗಳ ಚಲನ ಸಿದ್ಧಾಂತ ಈ ಕ್ಷೇತ್ರಗಳಲ್ಲಿ ಕೂಡ ಈತ ಅಧ್ಯಯನ ನಡೆಸಿರುವನು

ಘನವಸ್ತುಗಳ ವಿಶಿಷ್ಟೋಷ್ಣಗಳನ್ನು (ಸ್ಪೆಸಿಫಿಕ್ ಹೀಟ್ಸ್) ವಿವರಿಸುವಲ್ಲಿ ಐನ್‍ಸ್ಟೈನ್ ಘನವಸ್ತುವಿನ ಪರಮಾಣುಗಳ ಕಂಪನವನ್ನೂ ಅದಕ್ಕೆ ಸಂಬಂಧಿಸಿದ ಶಕ್ತಿಯನ್ನೂ ಗಣನೆಗೆ ತೆಗೆದುಕೊಂಡಿದ್ದ. ಒಟ್ಟು ಸ್ಫಟಿಕಜಾಲದ (ಕ್ರಿಸ್ಟಲ್ ಲ್ಯಾಟ್ಟಿಸ್) ಕಂಪನವನ್ನು ಗಣನೆಗೆ ತೆಗೆದುಕೊಂಡರೆ ಉತ್ತಮ ಫಲಿತಾಂಶಗಳು ಲಭಿಸುವುವೆಂಬುದನ್ನು ಬಾರ್ನ್ ತನ್ನ ಸಿದ್ಧಾಂತದಲ್ಲಿ ತೋರಿಸಿಕೊಟ್ಟ. ಪರಿಣಾಮವಾಗಿ ಜಾಲಕರಚನೆಗೆ ಪ್ರಾಮುಖ್ಯ ದೊರೆತು ಆ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಧ್ಯವಾಯಿತು.

ಉಷ್ಣಗತಿವಿಜ್ಞಾನದ ಪ್ರಥಮ ನಿಯಮವನ್ನು ಬಾರ್ನ್ ಪುನಃ ಸೂತ್ರೀಕರಿಸಿದ. ಪುಟಿತ ವ್ಯವಸ್ಥೆಗಳ ಸ್ಥಿರತೆ (ಸ್ಟೆಬಿಲಿಟಿ ಆಫ್ ಇಲ್ಯಾಸ್ಟಿಕ್ ಸಿಸ್ಟಮ್ಸ್) ಸಂಘನಿತ (ಕಂಡೆನ್ಸ್ಡ್) ಅನಿಲಗಳು ಮತ್ತು ದ್ರವಗಳ ಸಂಖ್ಯಾಕಲನಾತ್ಮಕ ಬಲವಿಜ್ಞಾನ, ಪರಮಾಣು ರಚನೆ, ಸಾಪೇಕ್ಷತಾ ಸಿದ್ಧಾಂತಗಳು ಮೊದಲಾದ ವಿಷಯಗಳಲ್ಲಿಯೂ ಕೆಲಸ ಮಾಡಿದ.

ಬಾರ್ನ್ ಮೇಧಾವಿಯಾದ ವಿಜ್ಞಾನಿಯಾಗಿದ್ದಂತೆಯೇ ಮಾನವತಾವಾದಿಯೂ ಆಗಿದ್ದ. ಮಾನವ ಕಲ್ಯಾಣದ ಬಗ್ಗೆ ಆತನಿಗೆ ಅಪಾರವಾದ ಕಳಕಳಿ. ಪರಮಾಣು ಶಕ್ತಿಯನ್ನು ವಿನಾಶಕಾರ್ಯಗಳಿಗೆ ಬಳಸುವುದನ್ನು ಐನ್‍ಸ್ಟೈನನಂತೆ ಬಾರ್ನ್ ಕೂಡ ಬಹಳವಾಗಿ ವಿರೋಧಿಸಿದ. ವಿಜ್ಞಾನದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಜವಾಬ್ದಾರಿ ರಾಜಕಾರಣಿಗಳ ಮೇಲೆ ಮಾತ್ರವಲ್ಲ ವಿಜ್ಞಾನಿಗಳ ಮೇಲೂ ಇದೆ. ವಿಜ್ಞಾನಿಗಳು ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಹೇಳಿದ. ಇದಕ್ಕಾಗಿ ಸೊಸೈಟಿ ಫಾರ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನ್ ಸೈನ್ಸ್  ವಿಜ್ಞಾನದಲ್ಲಿ ಸಾಮಾಜಿಕ ಜವಾಬ್ದಾರಿಗೆ ಸಂಘ-ಎಂಬ ಒಂದು ಅಂತಾರಾಷ್ಟ್ರೀಯ ಸಂಸ್ಥೆ ಹುಟ್ಟಿತು. ಬಾರ್ನ್ ಮತ್ತು ಐನ್‍ಸ್ಟೈನ್ ಇದರ ಸದಸ್ಯರಾಗಿದ್ದರು. ಪಗ್ವಾಷ್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಪರಮಾಣು ಅಸ್ತ್ರಗಳನ್ನು ನಿಷೇಧಿಸುವ ಬಗ್ಗೆ ಬಟ್ರ್ರೆಂಡ್ ರಸೆಲ್ ತಯಾರಿಸಿದ ಮನವಿಗೆ ಬಾರ್ನ್ ಸಹಿ ಹಾಕಿದ್ದ. ಅಲ್ಲದೆ 1952ರಲ್ಲಿ ಬಾರ್ನ್‍ನ ನೇತೃತ್ವದಲ್ಲಿ ಅಟೊಹಾನ್, ವೈಸೇಕರ್ ಇವರನ್ನೊಳಗೊಂಡ ಹದಿನೆಂಟು ಮಂದಿ ಜರ್ಮನ್ ಪರಮಾಣು ವಿಜ್ಞಾನಿಗಳು ಒಂದು ಜಂಟಿಹೇಳಿಕೆ ಇತ್ತು ಏನೇ ಆಗಲಿ, ಈ ಕೆಳಗೆ ಸಹಿ ಮಾಡಿರುವವರ ಪೈಕಿ ಯಾರೂ ಪರಮಾಣು ಅಸ್ತ್ರಗಳ ಉತ್ಪಾದನೆ, ಪರೀಕ್ಷೆ ಅಥವಾ ಶೇಖರಣೆ ಕಾರ್ಯದಲ್ಲಿ ಯಾವ ರೀತಿಯಲ್ಲಿಯೂ ಭಾಗವಹಿಸಲು ಸಿದ್ಧರಾಗಿಲ್ಲ ಎಂದು ಘೋಷಿಸಿದರು.

ಪರಮಾಣು ಬಾಂಬಿನ ತಯಾರಿಕೆಯಲ್ಲಿ ಬಾರ್ನ್ ಆಗಲಿ ಐನ್‍ಸ್ಟೈನ್ ಆಗಲಿ ನೇರವಾಗಿ ಭಾಗವಹಿಸಿರಲಿಲ್ಲ. ಆದರೆ ಅದು ಸಾಧ್ಯ ಎಂದು ಐನ್‍ಸ್ಟೈನ್ ರೂಸ್‍ವೆಲ್ಟ್‍ಗೆ 1939ರಲ್ಲಿ ಬರೆದ ಪತ್ರ ಪರಮಾಣು ಬಾಂಬಿಗೆ ನಾಂದಿ ಹಾಡಿತು. ಈ ಚಿಂತೆ ಐನ್‍ಸ್ಟೈನನನ್ನು ಕೊನೆಯ ತನಕವೂ ಬಾಧಿಸಿತು. ಬಾರ್ನ್ ಆದರೋ ಪರಮಾಣು ಬಾಂಬ್ ಜೊತೆ ಏನೇನೋ ಸಂಬಂಧ ಹೊಂದಿರಲಿಲ್ಲ. ಆದರೆ ಇದನ್ನು ತಯಾರಿಸಿದ ಅನೇಕ ಮೇಧಾವಿಗಳು ಬಾರ್ನ್‍ನ ಶಿಷ್ಯರಾಗಿದ್ದರು. ಇಲ್ಲವೇ ಅವನಿಂದ ಸ್ಫೂರ್ತಿ ಪಡೆದವರಾಗಿದ್ದರು. ಪರಮಾಣು ರಿಯಾಕ್ಟರನ್ನು ತಯಾರಿಸಿದ ಎನ್ರಿಕೊ ಫರ್ಮಿ ಪರಮಾಣುಬಾಂಬನ್ನು ನಿರ್ಮಿಸಿದ ಓಪನ್ ಹೈಮರ್ ಮತ್ತು ಹೈಡ್ರೊಜನ್ ಬಾಂಬಿನ ತಯಾರಿಕೆಗೆ ಕಾರಣನಾದ ಎಡ್ವರ್ಡ್ ಟೆಲ್ಲರ್ ಬಾರ್ನ್‍ನ ಶಿಷ್ಯರಾಗಿದ್ದರು. ಈ ರೀತಿಯಲ್ಲಿ ಇವುಗಳ ತಯಾರಿಕೆಗೆ ತಾನೂ ಜವಾಬ್ದಾರನಾಗಿರಬಹುದೇ ಎಂಬ ಚಿಂತೆ ಈತನನನ್ನು ಕಾಡುತ್ತಿತ್ತು. ಅಂಥ ಮಹಾ ಮೇಧಾವಿಗಳಾದ ಶಿಷ್ಯರನ್ನು ಪಡೆದಿದ್ದುದೇನೋ ತೃಪ್ತಿ ಉಂಟು ಮಾಡುವ ವಿಷಯವೇ; ಆದರೆ ಅವರು ತುಸು ಕಡಿಮೆ ಜಾಣ್ಮೆಯನ್ನೂ ಕೊಂಚ ಹೆಚ್ಚಿನ ವಿವೇಕವನ್ನೂ ತೋರಿದ್ದರೆ ಚೆನ್ನಾಗಿರುತ್ತಿತ್ತೇನೋ ಎನಿಸುತ್ತದೆ ಎಂದು ಒಂದೆಡೆ ಮರುಗಿದ್ದಾನೆ ಬಾರ್ನ್.

ಐನ್‍ಸ್ಟೈನ್ ಅಮೆರಿಕಕ್ಕೆ ಹೋದಮೇಲೆ ಬಾರ್ನ್ ಅವನನ್ನು ನೋಡಿಯೇ ಇರಲಿಲ್ಲ. ಹಲವಾರು ವರ್ಷಗಳೇ ಆಗಿಹೋಗಿದ್ದವು. ಹೀಗಿರಲು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಬಾರ್ನ್‍ಗೆ ಆಹ್ವಾನ ಬಂದಿತು. ಈತನಿಗೂ ಐನ್‍ಸ್ಟೈನನ್ನು ನೋಡುವ ಉತ್ಕಟೇಚ್ಛೆ ಇತ್ತು. ಆದರೆ ಈತನ ಶಿಷ್ಯನೂ ಹೈಡ್ರೊಜನ್ ಬಾಂಬಿನ ತಯಾರಿಕೆಗೆ ಕಾರಣನಾದ ಎಡ್ವರ್ಡ್ ಟೆಲ್ಲರ್ ಅಲ್ಲಿದ್ದ. ತನ್ನ ಶಿಷ್ಯ ಪ್ರತಿಭಾವಂತನೆಂಬ ಹೆಮ್ಮೆಯಿದ್ದರೂ ವಿನಾಶಕಾರಿ ಬಾಂಬಿನ ತಯಾರಿಕೆಗೆ ಕಾರಣನಾದನೆಂದು ಅವನ ಮೇಲೆ ಬಾರ್ನ್‍ಗೆ ಬಹಳ ಅಸಮಾಧಾನವಿತ್ತು. ಕ್ಯಾಲಿಫೋರ್ನಿಯಕ್ಕೆ ಹೋದರೆ ಟೆಲ್ಲರ್‍ನನ್ನು ನೋಡಬೇಕಾಗುತ್ತದೆಂಬ ಒಂದೇ ಕಾರಣದಿಂದ ಆ ಆಹ್ವಾನ ತಿರಸ್ಕರಿಸಿದ. ಹೀಗೆ ಬಾರ್ನ್ ಮಾನವೀಯತೆಯ ಸಾಕಾರಮೂರ್ತಿಯಾಗಿದ್ದ.

ಐನ್‍ಸ್ಟೈನ್ ಬಾರ್ನನ ಆಪ್ತಮಿತ್ರ. ಆತನ ಬಗ್ಗೆ ಬಾರ್ನ್‍ಗೆ ಅಪಾರ ಗೌರವ. ಸ್ವತಃ ಭೌತವಿಜ್ಞಾನಿಗಳ ಭೌತವಿಜ್ಞಾನಿ ಎಂದು ಕರೆಸಿಕೊಂಡಿದ್ದ ಬಾರ್ನ್ ಐನ್‍ಸ್ಟೈನನಿಗೆ ನಿನ್ನನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿ ನನ್ನ ಮೆಚ್ಚುಗೆಗೆ ಪಾತ್ರನಾದ ವ್ಯಕ್ತಿ ಇನ್ನೊಬ್ಬನಿಲ್ಲ ಎಂದು ತಿಳಿಸಿದ್ದಾನೆ.

ಬಾರ್ನನಿಗೆ ತನ್ನ ಶಿಷ್ಯರಲ್ಲಿ ಬಹಳ ಪ್ರೀತಿ. ಅವರ ಸಾಧನೆಗಳನ್ನು ಮುಕ್ತ ಕಂಠದಿಂದ ಹೊಗಳುತ್ತಿದ್ದ. ತನ್ನ ಶಿಷ್ಯನಾದ ಪೌಲಿಯನ್ನು ಕುರಿತು ಗಟಿಂಗನ್ನಿನಲ್ಲಿ ನನ್ನ ಸಹಾಯಕನಾಗಿದ್ದಾಗಲೇ ಈತ ಐನ್‍ಸ್ಟೈನನಿಗೆ ಮಾತ್ರ ಹೋಲಿಸಬಹುದಾದ ಪ್ರತಿಭಾವಂತನೆಂದು ಅರಿತಿದ್ದ. ಶುದ್ಧವಿಜ್ಞಾನದ ದೃಷ್ಟಿಕೋನದಿಂದ ಮಾತ್ರ ನೋಡುವುದಾದರೆ ಅವನು ಐನ್‍ಸ್ಟೈನನಿಗಿಂತಲೂ ದೊಡ್ಡವನೆನಿಸುತ್ತದೆ ಎಂದು ಹೇಳಿದ್ದಾನೆ.

1954ರಲ್ಲಿ ವಾಲ್ತರ್  ಬೋತೆಯೊಡನೆ ಈತನಿಗೆ ನೊಬೆಲ್ ಬಹುಮಾನ ಲಭಿಸಿತು. ರಾಯಲ್ ಸೊಸೈಟಿಯ ಫೆಲೋ ಆಗಿಯೂ ಈತನನ್ನು ಆರಿಸಲಾಯಿತು. ಬಾರ್ನ್ ಉತ್ತಮ ಬರಹಗಾರನೂ ಹೌದು. ಸುಮಾರು 300 ಸಂಶೋಧನ ಪ್ರಬಂಧಗಳನ್ನೂ 20ಕ್ಕೂ ಹೆಚ್ಚು ಪುಸ್ತಕಗಳನ್ನೂ ಬರೆದಿದ್ದಾನೆ. ವಿಜ್ಞಾನದ ಪ್ರೌಢ ವಿದ್ಯಾರ್ಥಿಗಳಿಗಾಗಿ ಗಹನ ವೈಜ್ಞಾನಿಕ ಗ್ರಂಥಗಳ ಜೊತೆಯಲ್ಲಿಯೇ ಸಾಮಾನ್ಯ ಓದುಗರಿಗಾಗಿ ಜನಪ್ರಿಯ ವಿಜ್ಞಾನ ಪುಸ್ತಕಗಳನ್ನೂ ಬರೆದಿದ್ದಾನೆ. ಅವನ ಪುಸ್ತಕಗಳಲ್ಲಿ ಅಟಾಮಿಕ್ ಫಿಸಿಕ್ಸ್ ಬಲು ಜನಪ್ರಿಯವಾಗಿದೆ. ಜರ್ಮನ್ ಭಾಷೆಯಲ್ಲಿ ಎ ಟೆಕ್ಸ್ಟ್ ಬುಕ್ ಆಫ್ ಆಪ್ಟಿಕ್ಸ್ ಎಂಬ ಪುಸ್ತಕ ಬರೆದ. ಇ.ಊಲ್ಫ್‍ನ ಜೊತೆಯಲ್ಲಿ ಇದರ ಇಂಗ್ಲಿಷ್ ಭಾಷಾಂತರವನ್ನೂ ಮಾಡಿದ. ಸುನ್ ಹು ಅಂಗ್‍ನೊಡನೆ ಬರೆದಿರುವ ಪುಸ್ತಕ ಫಿಸಿಕ್ಸ್ ಅಂಡ್ ಪಾಲಿಟಿಕ್ಸ್. ಈತನ ಇತರ ಗ್ರಂಥಗಳು ದಿ ರೆಷ್ಟ್‍ಲೆಸ್ ಯೂನಿವರ್ಸ್, ಫಿಸಿಕ್ಸ್ ಇನ್ ಮೈ ಜನರೇಷನ್, ನ್ಯಾಚುರಲ್ ಫಿಲಾಸಫಿ, ಆಫ್ ಕಾಸ್ ಅಂಡ್ ಟ್ರಾನ್, ಐನ್‍ಸ್ಟೈನ್ಸ್ ತೀಯರಿ ಆಫ್ ರಿಲೆಟಿವಿಟಿ, ತೀಯರಿ ಆಫ್ ಕ್ರಿಸ್ಟಲ್ ಲ್ಯಾಟಿಸಸ್ ಮೊದಲಾದವು.  5-1-1970 ರಂದು ಮರಣ.
(ಜಿ.ಎಸ್.ಡಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ